Telegram Join My Telegram WhatsApp Join My WhatsApp

“ವೈಭವ್ ಸೂರ್ಯವಂಶಿ” ಎಂಬ ಬ್ಯಾಟಿಂಗ್ ನ ವೈಭವ.

ಈತ ಮೈದಾನಕ್ಕಿಳಿದರೆ ಇವನನ್ನೇ ನೋಡುತ್ತಿರಬೇಕು ಎನ್ನುವಂತಹ ಆಕರ್ಷಕವಾದ ಮತ್ತು ಗಟ್ಟಿಮುಟ್ಟಾದ ಮೈಕಟ್ಟು. ಈತ ಬ್ಯಾಟ್ ಹಿಡಿದು ಕ್ರೀಸ್ ಗೆ ಇಳಿದರೆ, ಬೌಂಡರಿ ಸಿಕ್ಸರ್ ಗಳ ಸುರಿಮಳೆ. ಈತ ಮೈದಾನದ ತುಂಬೆಲ್ಲಾ ಓಡಾಡುವ ಅಭಿಮನ್ಯುವಿನಂತೆ (ಕದಳಿಯೋಳ್ ಮದದಾನೆ ಒಕ್ಕಂತೆ) ಭಾರತೀಯರ ಪಾಲಿಗೆ. ಫೈನಲ್ ಪಂದ್ಯಾಟದಲ್ಲಿ ಏಕಚಕ್ರಾಧಿಪತಿಯಂತೆ ಬ್ಯಾಟ್ ಬೀಸಿ 175 ರನ್ ಗಳನ್ನು ಚಚ್ಚಿ ಅಂಡರ್-19 ವಿಶ್ವಕಪ್ ನ್ನು 6ನೇ ಬಾರಿಗೆ ಜಯಿಸುವಂತೆ ಮಾಡಿದವ.

ಈತ ಬ್ಯಾಟ್ ಹಿಡಿದುಕೊಂಡು ಕ್ರೀಸ್ ನಲ್ಲಿ ಕೇವಲ 20 ಓವರ್ ಗಳನ್ನು ಆಡಿದರೆ ಸಾಕು ಆ ಪಂದ್ಯ ನಮ್ಮದೇ, ವಿಜಯಲಕ್ಷ್ಮಿ ನಮ್ಮ ಪಾಲಿಗೆ ಒಲಿಯುತ್ತಾಳೆ. ಈತನ ಕಣ್ಣುಗಳಲ್ಲಿ ಅದೇನೋ ತೇಜಸ್ಸು, ಈತ ಮಾತಿಗಿಳಿದರೆ ಪ್ರತೀ ಪದದಲ್ಲಿಯೂ ಕಾನ್ಫಿಡೆಂಟ್, ಈತ ಭಾರತೀಯ ಕ್ರಿಕೇಟ್ ನ್ನು ಮತ್ತೊಂದು ದರ್ಜೆಗೆ ಏರಿಸಲು ಭಗವಂತನೇ ಕಳುಹಿಸಿರುವ ವೀರ ಆಂಜನೇಯ, ದೇಶ ವಿದೇಶಗಳಲ್ಲಿ ಕ್ರಿಕೇಟ್ ಬ್ಯಾಟಿಂಗ್ ಎಂದಾಕ್ಷಣ ಈತನದೇ ಮಾತು. ನಮ್ಮ ಹಿರಿಯ ಕ್ರಿಕೇಟ್ ತಾರೆಗಳಿಂದ ಮಾತ್ರವಲ್ಲ ವಿದೇಶಿ ಕ್ರಿಕೇಟ್ ಕಲಿಗಳಿಂದಲೂ ಈತನದೇ ಗುಣಗಾನ. ಈತನ ಅಗ್ರೆಷನ್ ಕೇವಲ ಒಂದೆರಡು ಪಂದ್ಯಗಳಿಗೆ ಮಾತ್ರ ಸೀಮಿತ ಎಂದು ಹೇಳಿದವರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಕೊಂಡು ನೋಡುವ ಹಾಗೆ ಕನ್ಸಿಸ್ಟೆನ್ಸಿ ಮೆರೆದೆ ಆಟಗಾರ. ಇದಕ್ಕೆ ಸಾಕ್ಷಿ ಎಂಬಂತೆ ಅಂಡರ್-19 ವಿಶ್ವಕಪ್ – 2026 ಸರಣಿಯಲ್ಲಿ ಸರಣಿ ಶ್ರೇಷ್ಟ ಪ್ರದರ್ಶನ, ಫೈನಲ್ ಪಂದ್ಯ ದಂತಹ ಹೈ ಓಲ್ಟೇಜ್ ಪಂದ್ಯದಲ್ಲೂ ಸಹ ಇವನನ್ನು ಕಟ್ಟಿ ಹಾಕಲು ಇಂಗ್ಲೆಂಡ್ ತಂಡದ ವಿಶ್ವದರ್ಜೆ ಬೌಲರ್ ಗಳು ಅಕ್ಷರಶಃ ಸುಸ್ತಾಗಿ ಬಿದ್ದರು. ಇದು ಸಾಮಾನ್ಯ ಪ್ರತಿಭೆಯಲ್ಲ.

ನಾವು ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ವೀರೇಂದರ್ ಸೆಹ್ವಾಗ್ ರವರ ಬ್ಯಾಟಿಂಗ್ ನೋಡಲು ಎಷ್ಟೊಂದು ಆಸೆ ಪಡುತ್ತಿದ್ದೇವೋ. ಅದಕ್ಕಿಂತಲೂ ಹೆಚ್ಚಿನ ಆಸೆ ಈತನ ಬ್ಯಾಟಿಂಗ್ ವೈಭವವನ್ನು ನೋಡಲು. ಈತ ಕ್ರೀಸ್ ನಲ್ಲಿ ಇದ್ದಾಗ ಭಾರತೀಯ ಯಾವ ಕ್ರಿಕೇಟ್ ಪ್ರೇಮಿಗೂ ಒಂದೇ ಒಂದು ಕ್ಷಣವೂ ಬೇಜಾರಾಗುವುದೇ ಇಲ್ಲ. ಏನೋ ಒಂದು ರೀತಿಯ ಮನಸಿನಲ್ಲೇ ತಲ್ಲಣ. ಹೇಗೆ ಸೌರವ್ ಗಂಗೂಲಿ ದಾದ ಸ್ಪಿನ್ ಬೌಲರ್ ಗಳಿಗೆ ಮುನ್ನುಗ್ಗಿ ಬೆವರಿಳಿಯುಂತೆ ಪ್ರಹಾರ ಮಾಡುತ್ತಿದ್ದಾಗ ಆಗುತ್ತಿದ್ದಂತಹ ಪ್ರಚಂಡ ರೋಮಾಂಚನ. ಅದೇ ರೋಮಾಂಚನ ಈತನ ಬ್ಯಾಟಿಂಗ್ ನೋಡಿದಾಗಲೂ ಆಗುವುದು ಶತಸಿದ್ಧ. ಈತ ಚಿಕ್ಕ ವಯಸ್ಸಿನಲ್ಲೇ ಇಡೀ ಕ್ರಿಕೇಟ್ ಜಗತ್ತು ತನ್ನತ್ತ ನೋಡುವಹಾಗೆ ಮಾಡಿರುವುದು ಸರಿಯೇ. ಆದರೇ ಮುಂದಿನ ದಿನಗಳಲ್ಲಿಯೋ ಸಹ ತನ್ನ ಫಿಟ್ನೆಸ್ ಕಾಯ್ದುಕೊಂಡು ಭಾರತೀಯ ಕ್ರಿಕೇಟ್ ನ್ನು ಉತ್ತುಂಗಕ್ಕೆ ಕೊಂಡೊಯ್ಯಲಿ ಎನ್ನುವುದೇ ಪ್ರತಿಯೊಬ್ಬ ಭಾರತೀಯರ ಮನದಾಸೆ. ಮಹದಾಸೆ. ಈತ ಯಾರೆಂದು ನಿಮ್ಮಂತಹ ಸ್ಮಾರ್ಟ್ ಓದುಗರಿಗೆ ಹೇಳುವಂತಹ ಅವಶ್ಯಕತೆಯಿಲ್ಲ ಎನ್ನುವುದು ನನ್ನ ಭಾವನೆ.

ಸದ್ಯ ಭಾರತೀಯ ಕ್ರಿಕೇಟ್ ನ ದಂತಕತೆ ರಾಹುಲ್ ದ್ರಾವಿಡ್ ರವರ ಗರಡಿಯಲ್ಲಿ ರಾಜಸ್ಥಾನ್ ರಾಯಲ್ಸ್ ನ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಈತ, ಸಾಕಷ್ಟು ಸಲಹೆ ಸೂಚನೆಗಳನ್ನು ಪಡೆದುಕೊಂಡು ಅವರ ಮಾರ್ಗದರ್ಶನವನ್ನು ಪಡೆದುಕೊಂಡು ಯಶಸ್ವಿಯಾಗಲಿ ಎಂದು ಹಾರೈಸೋಣ.

 

ಭಾರತೀಯ ಕ್ರಿಕೇಟ್ ನ ಸುವರ್ಣ ಯುಗ

 

ಇನ್ನು ಭಾರತೀಯ ಕ್ರಿಕೇಟ್ ನ ಸುವರ್ಣ ಯುಗ ಪ್ರಾರಂಭ ವಾಗಿರುವ ಕುರಿತು ಮಾತನಾಡೋಣ. ಕಳೆದ ಬಾರಿಯ ಪುರುಷರ ಟಿ-20 ವಿಶ್ವ ಕಪ್ ಭಾರತದ ವಶ. ಮಹಿಳಾ ಕ್ರಿಕೇಟ್ ಓ.ಡಿ.ಐ ವಿಶ್ವ ಕಪ್ ಭಾರತದ ತಕ್ಕೆಗೆ. ನಮ್ಮ ಕನ್ನಡ ನಾಡಿನ ನೆಚ್ಚಿನ ತಂಡ ಮಹಿಳಾ ಆರ್.ಸಿ.ಬಿ ಕ್ರಿಕೇಟ್ ತಂಡ ಎರಡನೇ ಬಾರಿಗೆ ಡಬ್ಲೂ.ಪಿ.ಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು. ಹಾಗೂ ಮುಂಬೈ ಇಂಡಿಯನ್ಸ್ ತಂಡದ ಜೊತೆ ಜಂಟಿಯಾಗಿ ಎರಡು ಡಬ್ಲೂ.ಪಿ.ಎಲ್ ಚಾಂಪಿಯನ್ ಪಟ್ಟ ಗೆದ್ದ ಹಿರಿಮೆಯನ್ನು ತನ್ನದಾಗಿಸಿಕೊಂಡಿತು. ಇಷ್ಟು ಮಾತ್ರ ಹೇಳಿ ಈ ಲೇಖನವನ್ನು ಕೊನೆಗೊಳಿಸಿದರೆ ಅತ್ಯಂತ ದೊಡ್ಡ ತಪ್ಪು ಆಗುತ್ತದೆ.

ಯಾಕೆಂದರೆ ಈ ಬಾರಿ ಮಹಿಳಾ ಆರ್.ಸಿ.ಬಿ ತಂಡ ಆಡಿದ ರೀತಿ ಅದು ಬೇರೆ ಲೆವೆಲ್ ಆಟವಾಗಿತ್ತು. ಎಲ್ಲಾ ತಂಡಗಳೂ ಒಂದು ಪಂದ್ಯ ಗೆದ್ದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿದ್ದಾಗ ಈ ಬಲಿಷ್ಠ ಆರ್.ಸಿ.ಬಿ ತಂಡ ಮಾತ್ರ  ಎಲ್ಲಾ ತಂಡಗಳ ವಿರುದ್ದ ಗೆದ್ದು, ಟೂರ್ನಿಯಲ್ಲಿ ಸತತವಾಗಿ 5 ಪಂದ್ಯಗಳನ್ನು ಗೆದ್ದಾಗಿತ್ತು. ಇದರ ಎದುರಾಳಿ ತಂಡಗಳು ಗೆಲ್ಲುವುದು ಇರಲಿ, ಗೆಲುವಿನ ಸನಿಹಕ್ಕೂ ಬರಲು ಬಿಡಲಿಲ್ಲ ನಮ್ಮ ಆರ್.ಸಿ.ಬಿ ತಂಡ ಆ ರೀತಿಯಾದ ಡಾಮಿನೇಟಿಂಗ್ ಪರ್ಫಾರ್ಮೆನ್ಸ್ ನೀಡಿತು. ಪಂದ್ಯ ದಿಂದ ಪಂದ್ಯಕ್ಕೆ ಬಲಿಷ್ಠವಾಗುತ್ತಾ ಸಾಗಿತು. ಸ್ಮೃತಿ ಮಂದಾನ ರವರ ಶಾಂತ ಚಿತ್ತತೆಯ ಯಶಸ್ವೀ ನಾಯಕತ್ವ, ಗ್ರೇಸ್ ಹ್ಯಾರಿಸ್ ರವರ ಡ್ಯಾಷಿಂಗ್ ಓಪನಿಂಗ್, ಜಾರ್ಜಿಯಾ ವಾಲ್ ರವರ ಸಮಯೋಚಿತ ಬ್ಯಾಟಿಂಗ್, ರೀಚಾ ಘೋಷ್ ರವರ ಸೆನ್ಸಿಬಲ್ ಫಿನಿಷಿಂಗ್, ಹಾಗೂ ಸಿಕ್ಸರ್ ಗಳ ಆರ್ಭಟ. ಟಗರು ಪುಟ್ಟಿ ನಮ್ಮ ಬೆಂಗಳೂರಿನ ಕಂದ ನಮ್ಮ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್ ರವರ ಜಾಣ್ಮೆಯ ಆಲ್ ರೌಂಡ್ ಆಟ. ಅರುಂಧತಿ ರೆಡ್ಡಿ ರವರ ಕರಾರುವಾಕ್ ಬೌಲಿಂಗ್, ನದೀನ್ ಡಿ ಕ್ಲರ್ಕ್ ರವರ ಸಮಯೋಚಿತ ಆಲ್ ರೌಂಡ್ ಆಟ. ಲಾರೆನ್ ಬೆಲ್ ರವರ ಪವರ್ ಪ್ಲೇ ನಲ್ಲಿನ ಶಿಸ್ತು ಬದ್ದ ಬೌಲಿಂಗ್ ದಾಳಿ. ಇವೆಲ್ಲವೂ ಒಟ್ಟಾಗಿ ಸೇರಿ ಒಂದು ಅದ್ಬುತ ಬಲಿಷ್ಠ ತಂಡವನ್ನೇ ಕಟ್ಟಿಯಾಗಿತ್ತು. ಈ ತಂಡ ಅದೆಷ್ಟು ಬಲಿಷ್ಠವಾಗಿತ್ತೆಂದರೆ ಸ್ವಲ್ಪ ಹೆಚ್ಚಿನ ಪ್ರಯತ್ನ ಪಟ್ಟಿದ್ದರೆ. ಐ.ಪಿ.ಎಲ್ ನಲ್ಲಿ ಪಾಲ್ಗೊಳ್ಳುವ ಯಾವುದಾದರೂ ಪುರುಷರ ತಂಡವನ್ನು ಸೋಲಿಸಲು ಸಾಧ್ಯವಿತ್ತು. ಅದು ಏನೇ ಇರಲಿ ಭಾರತೀಯ ಕ್ರಿಕೇಟ್ ನ ಸುವರ್ಣ ಯುಗವಾದ ಈ ಹೊತ್ತಿನಲ್ಲಿ ಮಹಿಳಾ ಕ್ರಿಕೇಟ್ ಗೆ ಸಿಗುತ್ತಿರುವ ಈ ಪ್ರೋತ್ಸಾಹಕ್ಕೆ ನಮ್ಮಲ್ಲರ ಮೆಚ್ಚುಗೆ ವ್ಯಕ್ತವಾಗಲೇ ಬೇಕು. ಮುಂದುವರಿದು ನಮ್ಮ ಅಂಡರ್-19 ಬಾಲಕರ ವಿಶ್ವ ಕಪ್ ಕಿರೀಟ 6ನೇ ಬಾರಿಗೆ ನಮ್ಮ ದೇಶದ ತೆಕ್ಕೆಗೆ ಬಂದಿದೆ. ಪುರುಷರ ಟಿ-20 ವಿಶ್ವಕಪ್ ಪ್ರಾರಂಭವಾಗಿದೆ. ಅದೂ ಕೂಡ ಭಾರತ ಮತ್ತು ಶ್ರೀಲಂಕಾ ದೇಶಗಳ ಜಂಟೀ ಆಯೋಜನೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲ ತಂಡಗಳಿಗೂ ಶುಭ ಹಾರೈಸೋಣ. ನನ್ನ ಲೇಖನವನ್ನು ಓದಲು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು. ಕನ್ನಡಿಗರನ್ನು ಉಳಿಸಿ, ಕನ್ನಡವನ್ನು ಬೆಳೆಸಿ. ಜೈ ಕರ್ನಾಟಕ ಮಾತೆ.

Leave a Comment